ಕೋಟೆ ಬೆಟ್ಟ ಕೊಡಗು

 ಅವಲೋಕನ

ಕೋಟೆ ಬೆಟ್ಟ  ಕೊಡಗಿನ ಮೂರನೇ  ಎತ್ತರದ ಬೆಟ್ಟ. ಸಮುದ್ರ ಮಟ್ಟದಿಂದ 5314 ಅಡಿ ಅಥವಾ  1620ಮೀ. ಎತ್ತರವಿರುವ  ಈ ಬೆಟ್ಟ ಸೋಮವಾರಪೇಟೆ ತಾಲ್ಲೂಕಿನ ಮಾದಾಪುರ ಪಟ್ಟಣದ ಗರ್ವಾಲೆ ಎಂಬ  ಜಾಗದಲ್ಲಿದೆ. 29 ಕಿ. ಮೀ. ಪ್ರಯಾಣವನ್ನು ಸೋಮವಾರಪೇಟೆ ಪಟ್ಟಣದಿಂದ ಕೋಟೆಬೆಟ್ಟಕ್ಕೆ ಮಾಡಬೇಕು. ಸರ್ಕಾರಿ  ಮತ್ತು ಖಾಸಗಿ  ಬಸ್ಸು ವ್ಯವಸ್ಥೆ ಇಲ್ಲಿಯವರೆಗಿಲ್ಲ. ದಿನಕ್ಕೆ ಒಂದೆರಡು ಬಸ್ಸುಗಳು ಗರ್ವಾಲೆ  ಗ್ರಾಮದವರೆಗಿದ್ದು ಅಲ್ಲಿಂದ ಶಿರಂಗಳ್ಳಿ ಮಾರ್ಗವಾಗಿ 5.7 ಕಿ.ಮಿ. ದೂರವನ್ನು ಕಾಲ್ನಡಿಗೆ ಇಲ್ಲವೇ ಖಾಸಗಿ ವಾಹನಗಳ ಮೂಲಕ   ಪ್ರಯಾಣಿಸಬೇಕಾಗುತ್ತದೆ




ದೇವಸ್ಥಾನಗಳು

ಈ  ಕೋಟೆಬೆಟ್ಟದಲ್ಲಿ ಎರಡು ದೇವಸ್ಥಾನಗಳಿವೆ. ಕೋಟೆಶ್ವರ ಮತ್ತು ಬೊಟ್ಲಪ್ಪ  ಎಂಬ ಎರಡು  ಹೆಸರಿನಿಂದ  ಇಲ್ಲಿನ ಈಶ್ವರ ದೇವರನ್ನು  ಕೊಡವ   ಸ್ಥಳೀಯರು ಕರೆಯುತ್ತಾರೆ. ಈ ದೇವಾಲಯದ ಎದುರು ಬಸವನ ವಿಗ್ರಹವಿದೆ. ಇಲ್ಲಿ ಕೆಲವು ಅಡಿ ಜಾಗಗಳ ಅಂತರದಲ್ಲಿ ಸುಣ್ಣ ಬಣ್ಣ ಮಾಡಿರುವ ಎರಡು ಚಿಕ್ಕ ಚಿಕ್ಕ ಕೊಳಗಳಿವೆ. ಒಂದು ಕೊಳದ ನೀರನ್ನು ಕುಡಿಯಲು ಮತ್ತು ಹಬ್ಬ ಹರಿದಿನಗಳ ಆಚರಣೆಗೆಂದು ಬಳಸಲಾಗುತ್ತದೆ. ಮತ್ತೊಂದು ಕೊಳದ ನೀರನ್ನು ಪ್ರಾಣಿಗಳಿಗೆ ಮೀಸಲಾಗಿಡಲಾಗಿದೆ. ವರ್ಷ ಪೂರ್ತಿ ಈ ಕೊಳಗಳಲ್ಲಿ ನೀರು ತುಂಬಿರುತ್ತದೆಂದು ಸ್ಥಳೀಯ ಕೊಡವರು ಹೇಳುತ್ತಾರೆ.  ಬೆಟ್ಟದ  ತುದಿಯಲ್ಲೊಂದು, ತಳಭಾಗದಲ್ಲೊಂದು ಹೀಗೆ ಒಟ್ಟು ಎರಡು  ದೇವಾಲಯಗಳಿವೆ. ತುದಿಭಾಗದ ದೇವಾಲಯಕ್ಕೆ ಹಟ್ಟಿಹೊಳೆ ಸೇತುವೆಯಿಂದ ನದಿಯ ಎಡಮಗ್ಗುಲದ ರಸ್ತೆಯಲ್ಲಿ ಸಾಗಬೇಕು. ತಳಭಾಗದಲ್ಲಿರುವ  ಶಿವಲಿಂಗದ  ದೇವಾಲಯಕ್ಕೆ ಗರ್ವಾಲೆ  ಮಾರ್ಗವಾಗಿ ಸಾಗಬೇಕು.




   ಪೂಜೆ  ವಿಧಿ  ವಿಧಾನಗಳು 

ಕೋಟೆಬೆಟ್ಟದ  ತಳಭಾಗದಲ್ಲಿರುವ  ಶಿವಲಿಂಗದ  ಗುಹಾ ದೇವಾಲಯ  ಬೊಟ್ಲಪ್ಪ (ಈಶ್ವರ) ದೇವರ ಹಬ್ಬಗಳನ್ನು ಐಮುಡಿಯಂಡ ಕುಟುಂಬದವರು ದೇವತಕ್ಕರಾಗಿ ಮುಂದೆ ನಿಂತು ನಡೆಸುವರು. ಓಡಿಯಂಡ ಕುಟುಂಬದವರು  ಮುಕ್ಕಾಟಿಗಳು ಎಂದರೆ  ದೇವರ  ಪೂಜೆಗೆ,  ಹಬ್ಬಕ್ಕೆ ದೀಪಹಿಡಿಯುವುದರಿಂದ  ಹಿಡಿದು ಪೂಜೆಗೆ  ಸಕಲ  ಸಿದ್ಧತೆಯನ್ನು ಮಾಡಿ ಕೊಡುವರು. ಪ್ರತಿ ಮಂಗಳವಾರ ಪೂಜೆ  ನಡೆಯುತ್ತದೆ. ಬ್ರಾಹ್ಮಣರೇ ಅರ್ಚಕರು . ಪ್ರತಿ ವರ್ಷ  ಮಾರ್ಚ್ ತಿಂಗಳ  ಮೊದಲ ವಾರದ  ಮಂಗಳವಾರ ಇಲ್ಲಿ ಹಬ್ಬ ನಡೆಯುತ್ತದೆ. ಹಬ್ಬದ ದಿನದಂದು ಮತ್ತು ಇತರೆ ದಿನದಂದು ಹೆಂಗಸರಿಗೆ ಅಲ್ಲಿ  ಪ್ರವೇಶವಿಲ್ಲ. ಈ ಕಾರಣಕ್ಕಾಗಿ ಎರಡು ವರ್ಷಗಳಿಂದ ಇಲ್ಲಿ ತಂತಿ ಬೇಲಿ ಹಾಕಿ ಗೇಟ್ಗೆ ಬೀಗ ಹಾಕಲಾಗಿದೆ. 


ಕೋಟೆಬೆಟ್ಟದ  ತುದಿಭಾಗದಲ್ಲಿರುವ  ದೇವಾಲಯದ ಉಸ್ತುವಾರಿಯನ್ನು ಶಾಂತೆಯಂಡ  ಕುಟುಂಬದವರು ನಾಡ್ ತಕ್ಕರಾಗಿ, ಕನ್ನಿಕಂಡ ಕುಟುಂಬದವರು  ದೇವತಕ್ಕರಾಗಿ  ನೋಡಿಕೊಳ್ಳುವರು. ಪ್ರತಿ ವರ್ಷ  ಡಿಸೆಂಬರ್ ತಿಂಗಳ  ಮೊದಲ ವಾರ  ಇಲ್ಲಿ ಹಬ್ಬ  ಜರುಗುವುದು.

                                                                                                                                                                                    

ಕೋಟೆಬೆಟ್ಟದ ಬೊಟ್ಲಪ್ಪ ದೇವರ ಭಂಡಾರವನ್ನು ದೇವಾಲಯಕ್ಕೆ ಕೊಂಡೊಯ್ಯುತ್ತಿರುವ ಗರ್ವಾಲೆ ಗ್ರಾಮಸ್ಥರು.                                       

  ಗರ್ವಾಲೆ ಗ್ರಾಮದವರು ,ಐಮುಡಿಯಂಡ ಮತ್ತು ಓಡಿಯಂಡ ಕುಟುಂಬಸ್ಥರ ಮುಂದಾಳತ್ವದಲ್ಲಿ ಕೋಟೆಬೆಟ್ಟಗುಹಾದೇವಾಲಯದ ಅಂಗಳದಲ್ಲಿ ಕುಣಿಯುತ್ತಿರುವ  ಚಿತ್ರ .                        

ಕೋಟೆಬೆಟ್ಟ ಸೇರುವ ಮಾರ್ಗ :

ಇಲ್ಲಿಗೆ ನೇರವಾಗಿ ಬಸ್ಸು, ರೈಲು, ವಿಮಾನಗಳ ವ್ಯವಸ್ಥೆಗಳಿಲ್ಲ. ಸ್ವಂತ ವಾಹನ ಇಲ್ಲವೇ ಬಾಡಿಗೆ ವಾಹನಗಳ ಮೂಲಕ ನೇರವಾಗಿ ತಲುಪಬಹುದು. ರೈಲಿನಲ್ಲಿ ಮೈಸೂರು ನಗರದವರೆಗೂ ಹೋಗಿ ಅಲ್ಲಿಂದ ಮಡಿಕೇರಿ ಇಲ್ಲವೇ ಸೋಮವಾರಪೇಟೆ, ಇಲ್ಲವೇ ಕುಶಾಲನಗರದವರೆಗೆ ಬಸ್ಸಿನಲ್ಲಿ ಹೋಗಿ, ಅಲ್ಲಿಂದ ಖಾಸಗಿ ಬಸ್ಸಿನ ಮೂಲಕ  ಮಾದಾಪುರ ಪಟ್ಟಣ ತಲುಪಿ ಬಾಡಿಗೆಗೆ ಅಲ್ಲಿಂದ ಖಾಸಗಿ ವಾಹನ ಹಿಡಿದು ಕೋಟೆಬೆಟ್ಟ ತಲುಪಬಹುದು.  

ಗರ್ವಾಲೆ ಮತ್ತು ಹಟ್ಟಿಹೊಳೆ ಮಾರ್ಗವಾಗಿ ತೆರಳುವಾಗ ಮಾರ್ಗ ಮಧ್ಯೆ  ಅಂಗಡಿ, ಹೋಟೆಲು,ಆಸ್ಪತ್ರೆ, ಆರೋಗ್ಯಕೇಂದ್ರಗಳಿಲ್ಲದಿರುವ ಕಾರಣ ಕೆಲವು ಅಗತ್ಯ ವಸ್ತುಗಳನ್ನು ಜೊತೆಯಲ್ಲಿ ಕೊಂಡೊಯ್ಯಬೇಕು. 

ಕುಡಿಯಲು ನೀರು, ತಿನ್ನಲು ಆಹಾರ, ಜ್ವರ ತಲೆನೋವಿನ ಮಾತ್ರೆಗಳು. ಮಳೆಗಾಲದಲ್ಲಿ ಹೋಗುವವರಾದರೆ ಜಿಗಣೆ ಔಷಧಿಗಳು ಇತ್ಯಾದಿ. 


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ